ಕ್ಯಾರಟ್

ಅಂಬೆಲಿಫೆರೀ ಕುಟುಂಬಕ್ಕೆ ಸೇರಿದ ಜನಪ್ರಿಯ ತರಕಾರಿ ಸಸ್ಯ. ಡಾಕಸ್ ಕೆರೋಟ ಎಂಬುದು ಇದರ ವೈಜ್ಞಾನಿಕ ನಾಮ. ಕನ್ನಡದಲ್ಲಿ ಗಜ್ಜರಿ ಎಂದು ಕರೆಯುತ್ತಾರೆ. ಹೆಚ್ಚಿನ ಪರಿಮಾಣದ ಆಹಾರ ಶೇಖರಣೆಯಿಂದ ಬಹಳ ದಪ್ಪವಾಗಿ ಬೆಳೆಯುವ ತಾಯಿಬೇರು ಮತ್ತು ಹೈಪೊಕಾಟೈಲ್ ಭಾಗಗಳೇ ತರಕಾರಿಯಾಗಿ ಉಪಯೋಗವಾಗುವ ಭಾಗಗಳು. ಪಿಷ್ಠ ಮತ್ತು ಎ ವಿಟಮಿನ್ನಿನ ಪೂರ್ವಗಾಮಿ ವಸ್ತುಗಳಾದ ಕ್ಯಾರಟೀನುಗಳು ಈ ಭಾಗಗಳಲ್ಲಿ ಅತ್ಯಧಿಕ ಪರಿಮಾಣದಲ್ಲಿ ಸಂಗ್ರಹವಾಗಿವೆ. ಇವು ಬಹಳ ಪುಷ್ಟಿದಾಯಕ ವಸ್ತುಗಳು. ಕ್ಯಾರಟ್ಟಿನ ಬಣ್ಣಕ್ಕೆ ಕ್ಯಾರಟೀನೇ ಕಾರಣ. ಕ್ಯಾರಟ್ಟಿನ ಎಲೆಗಳಲ್ಲೂ ಪ್ರೋಟೀನು, ಖನಿಜಗಳು ಮತ್ತು ವಿಟಮಿನ್ನು ಗಳಿರುವುದರಿಂದ ಇವು ಕೂಡ ಬಹಳ ಪುಷ್ಟಿದಾಯಕಗಳು.

	ಕ್ಯಾರಟ್ ಮಧ್ಯ ಏಷ್ಯದ ಮೂಲವಾಸಿಯೆಂದು ಭಾವನೆ. ಬಹಶಃ ಪಂಜಾಬ್ ಇಲ್ಲವೆ ಕಾಶ್ಮೀರದ ಪರ್ವತಪ್ರದೇಶಗಳೇ ಇದರ ಉಗಮಸ್ಥಾನ. ಜರ್ಮನಿ ಮತ್ತು ಫ್ರಾನ್ಸ್‍ಗಳಲ್ಲಿ ಕ್ರಿಸ್ತಪೂರ್ವದಲ್ಲೇ ಇದನ್ನು ಬೆಳೆಸಲಾಗುತ್ತಿತ್ತೆಂದು ಹೇಳಲಾಗಿದೆ. ಚೀನದಲ್ಲಿ ಕ್ಯಾರಟ್ಟಿನ ಬೇಸಾಯ 13ನೆಯ ಶತಮಾನದಲ್ಲಿ ಆರಂಭವಾಯಿತು. 16ನೆಯ ಶತಮಾನದಲ್ಲಿ ಇಂಗ್ಲೆಂಡಿಗೆ ಕಾಲಿಟ್ಟ ಕ್ಯಾರಟ್ ಅನಂತರ ಅಮೆರಿಕವನ್ನು ಪ್ರವೇಶ ಮಾಡಿತು. ಬರಬರುತ್ತ ಪ್ರಪಂಚದಾದ್ಯಂತ ಹರಡಿತು. ಇದರ ಬೇಸಾಯ ಪ್ರಮುಖವಾಗಿ ಸಮಶೀತೋಷ್ಣವಲಯಗಳಲ್ಲಿದೆ.

ಸಮಶೀತೋಷ್ಣವಲಯಗಳಲ್ಲಿ ಕ್ಯಾರಟ್ ಒಂದು ದ್ವೈವಾರ್ಷಿಕ ಬೆಳೆ. ಉಷ್ಣವಲಯಗಳಲ್ಲಿ (ಉದಾ: ಭಾರತ) ಇದು ಏಕವಾರ್ಷಿಕ. ಸುಮಾರು 1'-4' ಎತ್ತರಕ್ಕೆ ಬೆಳೆಯುತ್ತದೆ. 2"-12" ಉದ್ದದ ದಪ್ಪನೆಯ ರಸಭರಿತ ತಾಯಿಬೇರೂ ಇದರ ಮೇಲ್ತುದಿಯಿಂದ ಹೊರಡುವ ಕಾಂಡವೂ ಕ್ಯಾರಟ್ಟಿನ ಮುಖ್ಯ ಲಕ್ಷಣಗಳು. ಕಾಂಡ ವಿಪುಲವಾಗಿ ಕವಲೊಡೆಯುತ್ತದೆ. ಇದರಿಂದ ಹಲವಾರು ಗರಿರೂಪದ ಸಂಯುಕ್ತ ಮಾದರಿಯ ಎಲೆಗಳು ಹಟ್ಟುತ್ತವೆ. ಏಕವಾರ್ಷಿಕ ಬಗೆಗಳಲ್ಲಿ ಮೊದಲ ವರ್ಷದ ಬೆಳೆವಣಿಗೆಯ ಅವಧಿಯ ಕೊನೆಗೂ ದ್ವೈವಾರ್ಷಿಕ ಬಗೆಗಳಲ್ಲಿ ಎರಡನೆಯ ವರ್ಷದ ಅಂತ್ಯದಲ್ಲೂ ಸಂಯುಕ್ತ ಛತ್ರಮಂಜರಿ ಮಾದರಿಯ ಅನೇಕ ಹೂಗೊಂಚಲುಗಳು ಹೊರಡುತ್ತವೆ. ಒಂದೊಂದರಲ್ಲೂ ಅಸಂಖ್ಯಾತ ಹೂಗಳಿವೆ. ಹೂಗಳ ಬಣ್ಣ ಬಿಳಿ ಇಲ್ಲವೆ ಹಳದಿ. ಹೂಗೊಂಚಲಿನ ಹೊರ ಸುತ್ತಿನ ಹೂಗಳಲ್ಲಿ ಅಸಮರೀತಿಯ ದಳಗಳೂ ಒಳಗಿನ ಹೂಗಳಲ್ಲಿ ಸಮರೀತಿಯ ದಳಗಳೂ ಇವೆ. ಫಲ ಸ್ಕೀಜೋóಕಾರ್ಪ್ ಬಗೆಯದರು. ಬಲಿತಾಗ ಒಂದೊಂದು ಫಲವೂ ಏಕಬೀಜವುಳ್ಳ ಎರಡು ಭಾಗಗಳಾಗಿ ಒಡೆಯುತ್ತದೆ. ಈ ಭಾಗಗಳಿಗೆ ಮೆರಿಕಾರ್ಪುಗಳೆಂದು ಹೆಸರು.

ಕ್ಯಾರಟ್ಟಿನಲ್ಲಿ ಪ್ರಮುಖವಾಗಿ ಯೂರೋಪಿಯನ್ ಮತ್ತು ಏಷ್ಯನ್ ಎಂಬ ಎರಡು ಬಗೆಗಳಿವೆ. ಒಂದೊಂದರಲ್ಲೂ ಹಲವಾರು ತಳಿಗಳಿವೆ. ಇವುಗಳ ಬೇರುಗಳ ಬಣ್ಣ, ಗಾತ್ರ ಮತ್ತು ಆಕಾರಗಳಲ್ಲಿ ವೈವಿಧ್ಯ ಉಂಟು. ಬಣ್ಣ ಬಿಳಿ ಇಲ್ಲವೆ ಹಳದಿಯಿಂದ ಕಿತ್ತಳೆ, ನಸು ಊದಾ, ಕಡುಗೆಂಪು ಮತ್ತು ಕಡು ನೇರಿಳೆ ವರೆಗೆ ವ್ಯತ್ಯಾಸವಾಗುತ್ತದೆ. ಆಕಾರದಲ್ಲಿ ಕೆಲವು ಶಂಕುವಿನಂತಿದ್ದರೆ ಇನ್ನು ಕೆಲವು ಉರುಳೆಯಂತಿವೆ. ಇವುಗಳಲ್ಲಿ ಚಾಂಟೆನೆ, ಡ್ಯಾನ್ವರ್ಸ್, ನ್ಯಾಂಟಿಸ್, ಇಂಪರೇಟರ್, ಮೋರ್ಸ್ ಬಂಚಿಂಗ್, ಅರ್ಲಿ ಹಾರ್ನ್, ಅರ್ಲಿ ಜೆಮ್ ಎಂಬುವು ಮುಖ್ಯವಾದವು. ಯೂರೋಪಿಯನ್ ಬಗೆಗಳಲ್ಲಿ ಹೆಚ್ಚು ಕ್ಯಾರಟೀನ್ ಇದ್ದು ಇವು ಹೆಚ್ಚು ಜನಪ್ರಿಯವಾಗಿವೆ. ಏಷ್ಯನ್ ಬಗೆಗಳು ಕೊಂಚ ಕೆಳದರ್ಜೆಯವು.

ಕ್ಯಾರೆಟ್ ಬೇಸಾಯ: ಕ್ಯಾರಟ್ಟನ್ನು ಬೀಜಗಳ ಮೂಲಕ ವೃದ್ಧಿಪಡಿಸಲಾಗುತ್ತದೆ. ಇದರ ಬೇಸಾಯಕ್ಕೆ ತಂಪು ಹವೆಯೂ ಬೇರುಗಳು ಸುಲಭವಾಗಿ ಇಳಿದು ಬೆಳೆಯಲು ಅವಕಾಶ ಮಾಡಿಕೊಡುವಂಥ ಸಡಿಲವಾದ, ಆಳವಾದ ಮತ್ತು ನೀರು ಸರಾಗವಾಗಿ ಚಲಿಸುವಂಥ ಮಣ್ಣೂ ಅತ್ಯಗತ್ಯ. ಮರಳು ಮಿಶ್ರಿತಗೋಡು ಶ್ರೇಷ್ಠ. ನೆಲದಲ್ಲಿ ಆಧಿಕಪರಿಮಾಣದಲ್ಲಿ ಸಾವಯವ ಪದಾರ್ಥವಿರಬೇಕು. ಸಮಶೀತೋಷ್ಣ ವಲಯಗಳಲ್ಲಿ ಕ್ಯಾರಟ್ಟನ್ನು ಮೈದಾನಪ್ರದೇಶದಲ್ಲಿ ಬೆಳೆಸುತ್ತಾರಾದರೂ ಉಷ್ಣವಲಯದಲ್ಲಿ ಬೆಟ್ಟಪ್ರದೇಶಗಳಲ್ಲೇ ಇದರ ಬೇಸಾಯ ಹೆಚ್ಚು. ಬೀಜ ಬಿತ್ತನೆಯ ಕಾಲ ಬೆಟ್ಟ ಪ್ರದೇಶಗಳಲ್ಲಿ ಮಾರ್ಚ್‍ನಿಂದ ಸೆಪ್ಟೆಂಬರ್, ಮೈದಾನಗಳಲ್ಲಿ ಆಗಸ್ಟಿನಿಂದ ನವೆಂಬರ್. ಬಿತ್ತನೆಯ ಮೊದಲು ನೆಲವನ್ನು ಚೆನ್ನಾಗಿ ಉತ್ತು ಹದಮಾಡಿ ಹೇರಳವಾಗಿ ಗೊಬ್ಬರ ಹಾಕಬೇಕು. ಸುಮಾರು ಒಂದು ಟನ್ ಇಳುವರಿ ಕೊಡುವಂಥ ಕ್ಯಾರಟ್ ಬೆಳೆ ತನ್ನ ಬೆಳೆವಣಿಗೆಯ ಅವಧಿಯಲ್ಲಿ ಸುಮಾರು 5 ಕೆಜಿ. ಪೊಟ್ಯಾಷ್ ಮತ್ತು 1.5 ಕೆಜಿ. ನೈಟ್ರೊಜನನ್ನು ಭೂಮಿಯಿಂದ ಹೀರುತ್ತದೆ ಎಂದು ಅಂದಾಜುಮಾಡಲಾಗಿದೆ. ಇದರಿಂದ ಬೀಜ ಬಿತ್ತುವ ಮೊದಲು ಯಥೇಚ್ಛವಾಗಿ (ಎಕರೆಗೆ 16 ಗಾಡಿ ಚೆನ್ನಾಗಿ ಕೊಳೆತ ಕೊಟ್ಟಿಗೆ ಗೊಬ್ಬರ ಮತ್ತು 20 ಕೆಜಿ. ಮ್ಯೂರಿಯೇಟ್ ಆಫ್ ಪೊಟ್ಯಾಷ್) ಗೊಬ್ಬರ ಹಾಕಬೇಕು. ಬೀಜಗಳನ್ನು 8"-18"ಗಳ ಅಂತರದ ಸಾಲುಗಳಲ್ಲಿ ಬಿತ್ತಬೇಕು. ಕ್ಯಾರಟ್ಟಿನ ಬಗೆಗಳನ್ನು ಅವಲಂಬಿಸಿ ಎಕರೆಗೆ ಸುಮಾರು 4-16 ಪೌಂ. ಬೀಜಬಿತ್ತಬೇಕಾಗುತ್ತದೆ. ಬೀಜ ಮೊಳೆಯುವುದು ನಿಧಾನ; ಬಿತ್ತನೆಯಾದ ಸುಮಾರು 10-20 ದಿವಸಗಳಲ್ಲಿ ಸಸಿಗಳು ಹುಟ್ಟುತ್ತವೆ. ಬಿತ್ತುವ ಮುನ್ನ ಬೀಜಗಳನ್ನು 12-24 ಗಂಟೆಗಳ ಕಾಲ ನೀರಿನಲ್ಲಿ ನೆನೆಯಿಟ್ಟರೆ ಶೀಘ್ರವಾಗಿ ಮೊಳೆಯುತ್ತವೆ. ಗಿಡಗಳು ಪರಸ್ಪರ ತುಂಬ ಹತ್ತಿರವಾಗಿರದಂತೆಯೂ ಕಳೆಗಳು ಬೆಳೆಯದಂತೆಯೂ ನೋಡಿಕೊಳ್ಳುಬೇಕು. ಒಣತಿಂಗಳುಗಳಲ್ಲಿ ವಾರಕ್ಕೆ ಒಂದು ಬಾರಿ ಚಳಿಗಾಲದಲ್ಲಿ 15 ದಿವಸಗಳಿಗೊಮ್ಮೆ ನೀರು ಹಾಯಿಸಬೇಕು. ನೀರಿನ ಪರಿಮಾಣ ಅತಿಯಾಗದಂತೆ ಎಚ್ಚರ ವಹಿಸಬೇಕು. ಹೀಗಾದರೆ ಬೇರುಗಳ ರುಚಿ ಕಡಿಮೆಯಾಗುತ್ತದೆ. ಸಸಿಗಳು ಹುಟ್ಟಿದ 2-4 ತಿಂಗಳುಗಳ ಅನಂತರ ಕ್ಯಾರಟ್ ಬೆಳೆ ಕುಯ್ಲಿಗೆ ಬರುತ್ತದೆ. ಸಮತಟ್ಟಾದ ನೆಲದ ಮೇಲೆ ಕೃಷಿಮಾಡಿದ ಕ್ಯಾರಟ್ಟುಗಳ ಮೇಲ್ಭಾಗವನ್ನು ಕತ್ತರಿಸಿ ತೆಗೆದು ಬೇರುಗಳನ್ನು ಗುದ್ದಲಿಯ ನೆರವಿನಿಂದ ಹೊರತೆಗೆಯಲಾಗುತ್ತದೆ. ಎತ್ತರಿಸಿದ ಸಾಲುಗಳಲ್ಲಿ ಬೆಳೆದಂಥವನ್ನು ಇಡಿಯಾಗಿ ಕಿತ್ತು ತೆಗೆದು ಅನಂತರ ಮೇಲ್ಭಾಗದ ಎಲೆಗಳನ್ನು ಕತ್ತರಿಸಲಾಗುತ್ತದೆ. ಎಲೆಗಳನ್ನು ಕತ್ತರಿಸದೇ ಬಿಡುವುದೂ ಇದೆ; ಯೂರೋಪ್ ಮತ್ತು ಅಮೆರಿಕಗಳಲ್ಲಿ ಈ ಕ್ರಮವೇ ವಾಡಿಕೆಯಲ್ಲಿದೆ. ಕ್ಯಾರಟ್ಟಿನ ಬಗೆ, ಬೆಳೆವಣಿಗೆಯ ಕಾಲ ಮತ್ತು ನೆಲದಗುಣಗಳನ್ನು ಅವಲಂಬಿಸಿ ಇದರ ಇಳುವರಿ ಎಕರೆಗೆ 7-18 ಟನ್ ವರೆಗೆ ವ್ಯತ್ಯಾಸವಾಗುತ್ತದೆ. ನೆಲದಿಂದ ಕಿತ್ತಬಳಿಕ ಬೇರುಗಳನ್ನು ಚೆನ್ನಾಗಿ ತೊಳೆದು ಬುಟ್ಟಿಗಳಲ್ಲೊ ಪೆಟ್ಟಿಗೆಗಳಲ್ಲೊ ತುಂಬಿ ಮಾರುಕಟ್ಟಿಗೆ ಕಳಿಸಲಾಗುತ್ತದೆ. ಎಲೆಗಳನ್ನು ಕತ್ತರಿಸಿದ ಕ್ಯಾರಟ್ಟನ್ನು ಅದರ ಗುಣವಾಗಲಿ ಪೌಷ್ಟಿಕ ಅಂಶಗಳಾಗಲಿ ಹಾಳಾಗದಂತೆ 5-6 ತಿಂಗಳುಗಳ ಕಾಲ ಸಂಗ್ರಹಿಸಿಡಬಹುದು. ಇವನ್ನು ಒಣಮರಳು ಮತ್ತು ಮರದ ಬೂದಿ ಇಲ್ಲವೆ ಇದ್ದಲಿನ ಮಿಶ್ರಣದಲ್ಲಿ ಶೇಖರಿಸಿಡುವುದರಿಂದ ಕೊಳೆಯದಂತೆ ಮಾಡಬಹುದು.

ಕ್ಯಾರಟ್ ಬೆಳೆಗೆ ಹಲವಾರು ಬಗೆಯ ಬೂಷ್ಟುರೋಗಗಳು ತಗಲುತ್ತವೆ. ಎರಿಸೈಫೆ ಪಾಲಿಗೋನಿ ಎಂಬ ಬೂಷ್ಟಿನಿಂದುಂಟಾಗುವ ಮಿಲ್‍ಡ್ಯೂ ರೋಗ ಮತ್ತು ಸರ್ಕೋಸ್ಪೋರ ಏಪಿಯೈ ಎಂಬುದರಿಂದ ಉಂಟಾಗುವ ಚುಕ್ಕೆರೋಗ ಮುಖ್ಯವಾದವು. ಅಲ್ಲದೆ ಸೈಲ ರೋಸೆ ಎಂಬ ನೊಣದ ಡಿಂಬಗಳು ಕ್ಯಾರಟ್ ಬೆಳೆಯ ಪ್ರಮುಖ ಪಿಡುಗುಗಳೆನಿಸಿವೆ. ಇವು ಬೇರಿನಲ್ಲಿ ತೂತು ಕೊರೆದು ಗಣನೀಯ ನಷ್ಟವನ್ನುಂಟು ಮಾಡುತ್ತವೆ. ಕ್ಯಾರಟ್ಟಿಗೆ ಒಂದು ಬಗೆಯ ವೈರಸ್ ತಗಲುವುದುಂಟು. ಇದರಿಂದ ಹಳದಿ ರೋಗ ಬರುತ್ತದೆ.

ಕ್ಯಾರಟ್ ಉತ್ತಮ ತರಕಾರಿಗಳಲ್ಲೊಂದು ಎಂದು ಹೆಸರಾತಿರುವುದು ಎಲ್ಲರಿಗೂ ತಿಳಿದದ್ದೆ. ಎ ವಿಟಮಿನ್ನಿನ ಪೂರ್ವಗಾಮಿ ವಸ್ತುವಾದ ಕ್ಯಾರಟೀನ್ ಇದರಲ್ಲಿರುವುದೊಂದೇ ಅಲ್ಲದೆ ಇದರಲ್ಲಿ ಬೇರೆ ಪೌಷ್ಟಿಕಾಂಶಗಳೂ ಹೇರಳವಾಗಿವೆ. ಕ್ಯಾರಟ್ಟಿನಲ್ಲಿನ ಅಂಶಗಳ ವಿವರ ಹೀಗಿದೆ: ತೇವಾಂಶ, 80.6%; ಪ್ರೋಟೀನು, 0.9%; ಕೊಬ್ಬು 0.1%; ಕಾರ್ಬೊಹೈಡ್ರೇಟು, 10.7%; ಖನಿಜಪದಾರ್ಥ, 1.1%;ನಾರಿನ ಅಂಶ, 1.2%; ಕ್ಯಾಲ್ಸಿಯಂ, 0.08%; ರಂಜಕ 0.03%. ಅಲ್ಲದೆ ಪ್ರತಿ ನೂರು ಗ್ರಾಂ. ಕ್ಯಾರಟ್ಟಿನಲ್ಲಿ 1.5 ಮಿಗ್ರಾಂ. ಕಬ್ಬಿಣ, 2,000-4,300 ಐಯು ಕ್ಯಾರಟೀನ್, 60 ಐಯು ಬಿ ವಿಟಮಿನ್ನು ಮತ್ತು 3 ಮಿಗ್ರಾಂ. ಸಿ ವಿಟಮಿನ್ನುಗಳೂ ಇವೆ. ಕ್ಯಾರಟ್ಟಿನ ಎಲೆಗಳನ್ನು ತಿನ್ನುವ ಕ್ರಮ ಜಾವ ದೇಶದವರಲ್ಲಿ ಉಂಟು. ಅಲ್ಲದೆ ಬೇರೂ ಎಲೆಗಳೂ ದನಗಳಿಗೆ ಮತ್ತು ಕುದುರೆಗಳಿಗೆ ಒಳ್ಳೆಯ ಆಹಾರವೆಂದು ಹೆಸರಾಗಿವೆ. ದನಗಳಿಗೆ ತಿನ್ನಿಸುವುದರಿಂದ ಹಾಲಿನ ಉತ್ಪನ್ನ ಹೆಚ್ಚುವುದೆಂದೂ ಕೋಳಿಗಳಿಗೆ ತಿನ್ನಿಸಿದರೆ ಅವುಗಳ ಮೊಟ್ಟೆಗಳಲ್ಲಿ ವಿಟಮಿನ್ ಎ ಅಂಶ ಹೆಚ್ಚುವುದೆಂದೂ ಕೋಳಿಗಳಿಗೆ ತಿಳಿದುಬಂದಿದೆ. ಕ್ಯಾರಟ್ ಎಲೆಗಳು ಒಳ್ಳೆಯ ಹಸಿರುಗೊಬ್ಬರವೂ ಹೌದು. ಬೇರಿನಿಂದ ರಸವನ್ನೂ ತೆಗೆಯಬಹುದು. ಕ್ಯಾರಟ್ಟಿನಲ್ಲಿನ ಎಲ್ಲ ಪೌಷ್ಟಕಾಂಶಗಳೂ ಇದರಲ್ಲಿದ್ದು ಇದೊಂದು ಒಳ್ಳೆಯ ಪಾನೀಯವೆಂದು ಹೆಸರಾಗಿದೆ. ರಸವನ್ನು ತೆಗೆದಮೇಲೆ ಉಳಿಯುವ ಚರಟವನ್ನು ದನಗಳ ಆಹಾರವಾಗಿ ಬಳಸುವುದುಂಟು. ಇದರಿಂದ ಕ್ಯಾರಟೀನನ್ನೂ ತೆಗೆಯಬಹುದು. ಕ್ಯಾರಟ್ಟಿಗೆ ಔಷಧೀಯ ಗುಣಗಳೂ ಇವೆ. ಇದರಿಂದ ತಯಾರಿಸಲಾಗುವ ಕಷಾಯವನ್ನು ಲಾಡಿಹುಳುವಿನ ನಿವಾರಣೆಗೆ ಬಳಸುತ್ತಾರೆ. ಕ್ಯಾರಟ್ಟನ್ನು ಹೆಚ್ಚು ಪರಿಮಾಣದಲ್ಲಿ ಸೇವಿಸಿದರೆ ದೇಹದಲ್ಲಿನ ನೈಟ್ರೊಜನ್ ಅಂಶ ಹೆಚ್ಚುವುದೆಂದು ತಿಳಿದಿದೆ. ಒಣಗಿಸಿದ ಕ್ಯಾರಟ್ಟಿಗೆ ಪೆಟ್ರೋಲಿಯಮ್ ಈಥರ್ ಸೇರಿಸುವುದರಿಂದ ಒಂದು ರೀತಿಯ ಹಳದಿಬಣ್ಣದ ವಸ್ತುವನ್ನು ಬೇರ್ಪಡಿಸಬಹುದು. ಇದನ್ನು ಬಾದಾಮಿ ಎಣ್ಣೆಯಲ್ಲಿ ಕರಗಿಸಿ ಚುಚ್ಚು ಮದ್ದಾಗಿ ಕೊಟ್ಟರೆ ರಕ್ತದಲ್ಲಿನ ಸಕ್ಕರೆಯ ಅಂಶ ಗಣನೀಯವಾಗಿ ಕಡಿಮೆಯಾಗುವುದು ಕಂಡುಬಂದಿದೆ. ಕ್ಯಾರಟ್ ಬೀಜಗಳಿಗೆ ಉತ್ತೇಜಕ ಮತ್ತು ಜೀರ್ಣಕಾರಕ ಗುಣಗಳಿವೆ. ಮೂತ್ರಪಿಂಡ ಸಂಬಂಧಿ ರೋಗಗಳಿಗೂ ಜಲೋದರ ರೋಗಕ್ಕೂ ಬೀಜಗಳು ಒಳ್ಳೆಯ ಔಷಧಿ ಎಂದು ಹೇಳಲಾಗಿದೆ. ಬೀಜಗಳಿಂದ ಒಂದು ಬಗೆಯ ಚಂಚಲತೈಲವನ್ನು ತೆಗೆಯುವುದಿದೆ. ಹಲವಾರು ಮಾದಕ ಪಾನೀಯಗಳಿಗೆ ವಾಸನೆ ಕೊಡಲು ಇದನ್ನು ಬಳಸುತ್ತಾರೆ.											                 *

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ